ಐಟಿ ದಾಳಿಯಲ್ಲಿ ರಾಜಕೀಯ ಇದೆ -ಸಿದ್ದರಾಮಯ್ಯ

ಮೈಸೂರು: ಐಟಿ ದಾಳಿಯಲ್ಲಿ ರಾಜಕೀಯ ಇದೆ ಎಂಬುದು ನನ್ನ ಅನುಮಾನ. ಯಡಿಯೂರಪ್ಪ, ವಿಜಯೇಂದ್ರ ಆಪ್ತರನ್ನೇ ಸೆಲೆಕ್ಟ್ ಮಾಡಿಕೊಂಡು ದಾಳಿ ಮಾಡಿರೋದು ಸಾಕಷ್ಟು ಅನುಮಾನಕ್ಕೆಡೆಮಾಡಿಕೊಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನನಗಂತೂ ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದವರು ಹೇಳಿದರು.

ಮುಂದೆ ನಡೆಯಲಿರುವ ಎರಡೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆ ದಿಕ್ಸೂಚಿ ಅಂತ ಹೇಳುವುದಿಲ್ಲ. ಹಾಗೇ ಹೇಳುವುದಕ್ಕೂ ಸಾಧ್ಯವಿಲ್ಲವೆಂದರು.

ಆದರೆ ಈ ಫಲಿತಾಂಶದಿಂದ ಈ ಸರ್ಕಾರದ ಮೇಲೆ ಜನರ ಅಭಿಪ್ರಾಯ ಏನು ಎಂಬುದು ಗೊತ್ತಾಗುತ್ತೆ. ಜನ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳಿಂದ ಬೇಸತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಅನ್ನು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಿಸುತ್ತಾರೆ. ಜೆಡಿಎಸ್ ನವರು ಒಳ್ಳೆಯ ಉದ್ದೇಶದಿಂದಂತೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ. ಅಲ್ಪಸಂಖ್ಯಾತರ ಮತಗಳನ್ನು ವಿಂಗಡಿಸುವುದೇ ಅವರ ಉದ್ದೇಶ. ಆದರೆ ಜನ ಬುದ್ಧಿವಂತರಿದ್ದಾರೆ. ಇಂತಹ ತಂತ್ರಗಳು ಜನರಿಗೆ ಅರ್ಥವಾಗುತ್ತವೆ ಎಂದರು.