ಚಿಕ್ಕಮಗಳೂರು: ಆರ್ ಎಸ್ ಎಸ್ ದೇಶ ಒಡೆಯುವ ಸಂಘಟನೆಯಲ್ಲ, ದೇಶವನ್ನು ಜೋಡಿಸುವ ಸಂಘಟನೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಟಿ ರವಿ ಮಾತನಾಡಿ, ಓಟಿನ ಭಕ್ತರಾಗಿ ಗಳಿಗೆಗೊಂದು ಮಾತನಾಡುವವರಿಗೆ ಆರ್ ಎಸ್ ಎಸ್ ಅರ್ಥವಾಗುವುದಿಲ್ಲ ಎಂದು ಹೇಳುವ ಮೂಲಕ ಸಿ.ಟಿ. ರವಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಗಳಿಗೆಗೊಂದು ಮಾತನಾಡುವ ಹೆಚ್ಡಿಕೆ ಅವರ ಮಾತು ಅವರ ಅಜ್ಞಾನವನ್ನು ತೋರುತ್ತದೆಂದು ಸಿಟಿ ರವಿ ಟೀಕಿಸಿದರು.
ಯಾವುದೋ ಪುಸ್ತಕ ಓದಿ ತಿಳಿದುಕೊಂಡೆ ಎನ್ನುತ್ತಾರೆ ಪುಸ್ತಕವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿ ಬರೆಯುತ್ತಾರೆ ಸಂಘದ ಸ್ವಯಂಸೇವಕರು ಆದಾಗ ಮಾತ್ರ ಆರೆಸ್ಸೆಸ್ ಏನು ಎನ್ನುವುದು ಅರ್ಥವಾಗುತ್ತದೆ ಎಂದರು .
ಆರ್ ಎಸ್ ಎಸ್ ನಲ್ಲಿ ಸದಸ್ಯತ್ವ ಇಲ್ಲವೇ ಇಲ್ಲ ಅಲ್ಲೇ ಕುಮಾರಸ್ವಾಮಿ ಅವರ ಅಜ್ಞಾನ ಕಾಣಿಸುತ್ತೆ. ಅಲ್ಲಿರುವುದು ಸ್ವಯಂಸೇವಕರು ಮಾತ್ರ. ತಿಂಗಳ ಶುಲ್ಕ ಎನ್ನುವುದು ಇರುವುದಿಲ್ಲ. ಅಲ್ಲಿ ಸದಸ್ಯತ್ವ ಅನ್ನುವುದೇ ಇಲ್ಲ ಎಂದಾಗ ಆರ್ ಎಸ್ ಎಸ್ ನವರು ಸಿಂಡಿಕೇಟ್ ಸದಸ್ಯರು ಹೇಗಾಗುತ್ತಾರೆ ಎಂದರು.
ಇತ್ತೀಚೆಗೆ ಕುಮಾರಸ್ವಾಮಿ ಅವರಿಗೆ ಪ್ರಚಾರದ ಗೀಳು ಹೆಚ್ಚಾಗಿದೆ ರಾಮ ಮಂದಿರದ ವಿಚಾರದಲ್ಲಿ ಪ್ರಚಾರದ ತೆವಲಿಗೆ ಕೆಲವು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ, ಉದ್ದೇಶಗಳು ಇಲ್ಲ ಎಂದರು.
ಕುಮಾರಸ್ವಾಮಿ ಹೇಳುತ್ತಿರುವ ಮಾತು ತಾನು ಕಳ್ಳ ಪರರ ನಂಬ ಎನ್ನುವಂತಿದೆ. ರಾಮಮಂದಿರ ಚಳುವಳಿಗೆ ಅವರ ಪಾತ್ರವೇನು? ಹೋರಾಟಕ್ಕೆ ಬಂದಿದ್ರಾ? ಕರ ಸೇವೆಗೆ ಬಂದಿದ್ರಾ? ರಾಮ ಜ್ಯೋತಿಯಾತ್ರೆ ಕಾರ್ಯಕ್ರಮಕ್ಕೆ ಬಂದಿದ್ರಾ? ಇಟ್ಟಿಗೆ ಪೂಜೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದರಾ? ಶಿಲಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು? ಏನೋ ಅವರ ಪಾತ್ರ ಎಂದು ಪ್ರಶ್ನಿಸಿದರು.
ದೇಶದಲ್ಲಿ ಆರ್ ಎಸ್ ಎಸ್ ಇಲ್ಲವಾಗಿದ್ದರೆ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಲು ಯಾರು ಇರುತ್ತಿದ್ದರು. ಜೆಡಿಎಸ್ ನಲ್ಲಿ ದೇವೇಗೌಡರಿಗೆ ಜೈ, ಕುಮಾರಸ್ವಾಮಿಗೆ ಜೈ, ನಿಖಿಲ್ ಗೆ ಜೈ, ಕಾಂಗ್ರೆಸ್ ನಲ್ಲಿ ಸೋನಿಯಾಗಾಂಧಿಗೆ ಜೈ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಗೆ ಜೈ, ಮಾತ್ರ. ಅವರ ದೃಷ್ಟಿಯಲ್ಲಿ ಭಾರತ್ ಮಾತಾಕಿ ಜೈ ಕೂಗುವುದು ಅಪರಾಧ, ಅವರು ಕೋಮುವಾದಿಗಳು ಎಂದರು.
ನಮ್ಮ ದೇಶದಲ್ಲಿ ಆರ್ ಎಸ್ ಎಸ್ ಒಂದು ವೇಳೆ ಇಲ್ಲ ಎಂದುಕೊಂಡರೆ ಕಾಶ್ಮೀರಿ ಪಂಡಿತರ ರಕ್ಷಣೆಗೆ ಹೋಗುವವರು ಯಾರು? ದೇಶದ ಉದ್ದಗಲಕ್ಕೆ ಹಿಂದುಗಳ ಮೇಲೆ ನಡೆಯುವ ಅತ್ಯಾಚಾರ ವಿರುದ್ಧ ಧ್ವನಿ ಎತ್ತುವವರು ಯಾರು? ಎಂದ ಅವರು ಜಾತಿ ಪರವಾಗಿ ಧ್ವನಿ ಎತ್ತುವವರು ಇದ್ದಾರೆ. ರಾಜಕೀಯ ಲಾಭಕ್ಕೆ ಧ್ವನಿ ಎತ್ತುವವರು ಇದ್ದಾರೆ. ಹಿಂದುಗಳ ಪರವಾಗಿ ಯಾರು ಇರುತ್ತಾರೆ ಎಂದು ಪ್ರಶ್ನಿಸಿದರು.

