ಸಂಜೆ ಜೆಡಿಎಸ್ ಅಭ್ಯರ್ಥಿ ಆಯ್ಕೆ -ಹೆಚ್ ಡಿಕೆ

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಮೈಸೂರು ಭಾಗದಿಂದ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಇನ್ನು ಅಂತಿಮ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಮೈಸೂರಲ್ಲಿ sಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಸಂಜೆ ನಮ್ಮ ಪಕ್ಷದ ಸಭೆ ಕರೆಯಲಾಗಿದ್ದು, ಅಲ್ಲಿ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿ ನಂತರ ತೀರ್ಮಾನಿಸಲಾಗುವುದು ಎಂದು ಹೇಳಿದರು.

ವಿಧಾನಪರಿಷತ್ ಚುನಾವಣೆಗೆ ಮೈಸೂರಿನಲ್ಲಿ ಶಾಸಕ ಜಿ .ಟಿ .ದೇವೇಗೌಡ ಅವರ ಸಂಬಂಧಿಕರು ಸ್ಪರ್ಧಿಸುತ್ತಾರಂತಲ್ಲ, ಈ ಬಗ್ಗೆ ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಸಾರಾ ಮಹೇಶ್ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಜಿ.ಟಿ.ದೇವೇಗೌಡರ ಸಂಬಂಧಿಕರು ಸ್ಪರ್ಧಿಸುವ ಬಗ್ಗೆ ನನ್ನ ಮುಂದೆ ಪ್ರಸ್ತಾಪ ಆಗಿಲ್ಲ ಎಂದರು.

ಸಾರಾ ಮಹೇಶ್ ಹಾಗೂ ನಾನು ಚೆನ್ನಾಗಿಯೇ ಇದ್ದೇವೆ ನಮ್ಮ ನಡುವೆ ಹುಳಿ ಹಿಂಡುವ ಕೆಲಸವನ್ನು ಯಾರೇ ಮಾಡಿದರೂ ಸಫಲರಾಗುವುದಿಲ್ಲ ಎಂದು ಎಚ್ ಡಿ ಕೆ ಹೇಳಿದರು.

ಸಿದ್ದರಾಮಯ್ಯನವರು ಅವರ ಕಾರ್ಯಕರ್ತರ ಮೇಲೆ ಹರಿಹಾಯ್ದಿದ್ದಾರಲ್ಲ ಎಂಬ ಪ್ರಶ್ನೆಗೆ ಹೌದು ಮಾಧ್ಯಮಗಳಲ್ಲಿ ನೋಡಿದೆ. ಚುನಾವಣೆಯಲ್ಲಿ ನಮ್ಮ ತಂದೆಯವರು ಸೋತಿದ್ದರು, ನಾನೂ ಸೋಲನುಭವಿಸಿದ್ದೆ ಈ ರೀತಿಯಾಗಿ ಎಂದೂ ನಾವು ನಡೆದುಕೊಳ್ಳಲಿಲ್ಲ. ಆ ಪಕ್ಷದ ಕಾರ್ಯಕರ್ತರು ಅಲ್ಲಿರಬೇಕ ಬೇಡವಾ ಎಂಬುದನ್ನು ಅವರೇ ತೀರ್ಮಾನಿಸಬೇಕು ಎಂದು ಹೇಳಿದರು.

ನೆರೆ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಬರೀ ಶಂಖ ಊದುವುದೇ ಆಗಿದೆ. ಯಾವುದನ್ನು ಕಾರ್ಯಗತಗೊಳಿಸುತ್ತಿಲ್ಲ, ನೆರೆಪೀಡಿತ ಪ್ರದೇಶಗಳಿಗೆ ಅಧಿಕಾರಿಗಳಾಗಲಿ, ಸಚಿವರಾಗಲಿ ಹೋಗಿಲ್ಲ, ಸಂತ್ರಸ್ಥರನ್ನು ಭೇಟಿಯಾಗಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.