ತಿರುಪತಿಯಲ್ಲಿ ರಸ್ತೆ- ರೈಲುಮಾರ್ಗ ಸ್ಥಗಿತ

ತಿರುಪತಿ: ಕಳೆದ ಹಲವಾರು ದಿನಗಳಿಂದ ಒಂದೇ ಸಮನೆ ಸುರಿದ ಭಾರೀ ಮಳೆಯಿಂದಾಗಿ ತಿರುಪತಿಯನ್ನು ಸಂಪರ್ಕಿಸುವ ವಿವಿಧ ರೈಲು ಮಾರ್ಗಗಳು ಹಾಗೂ ರಸ್ತೆ ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿದೆ.

ತಿರುಪತಿಯಲ್ಲಿ ಪ್ರಮುಖವಾಗಿ ಹೆದ್ದಾರಿಗಳು ಮತ್ತು ರಸ್ತೆಗಳು ಹಾಳಾಗಿರುವುದರಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವವರಿಗೆ ತೀವ್ರ ತೊಂದರೆಯಾಗಿದೆ.

ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‍ನಿಂದ ತಿರುಪತಿಗೆ ಹೋಗುವ ಎಲ್ಲ ಮಾರ್ಗಗಳೂ ಬಂದ್ ಆಗಿವೆ.

ತಿರುಪತಿಯನ್ನು ಸಂಪರ್ಕಿಸುವ ರೈಲು ಸಂಚಾರ ವನ್ನೂ ಸ್ಥಗಿತಗೊಳಿಸಲಾಗಿದ್ದು ತಿರುಪತಿಗೆ ಸಂಪರ್ಕವೇ ತಪ್ಪಿಹೋಗಿದೆ.

ಮಳೆಯಿಂದಾಗಿ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಸುತ್ತಲೂ ತುಂಬಿಕೊಂಡಿದ್ದ ಮಳೆ ನೀರನ್ನು ಬೇರೆಡೆಗೆ ಕಳುಹಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಇದರ ನಡುವೆಯೇ ತಿರುಪತಿ ಬಳಿಯ ರಾಯುಲು ಚೆರುವು ಜಲಾಶಯವು ನೀರಿನ  ಒತ್ತಡದಿಂದಾಗಿ ಒಡೆಯುವ ಹಂತತಲುಪಿದೆ.

ಅಣೆಕಟ್ಟೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು ಜನರು ಆತಂಕಕ್ಕೊಳಗಾಗಿದ್ದಾರೆ. ಚಿತ್ತೂರು ಜಿಲ್ಲಾಡಳಿತ ಈಗಾಗಲೆ 18 ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.

ನ. 18ರಿಂದ ನ. 30ವರೆಗಿನ ಅವಧಿಯಲ್ಲಿ ತಿರುಮಲದ ಶ್ರೀ ವೆಂಕ ಟೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಲು ಟಿಕೆಟ್ ಪಡೆದಿದ್ದ ಎಲ್ಲ ಭಕ್ತರಿಗೆ ಬೇರೆ  ದಿನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಶ್ರೀ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ ತಿಳಿಸಿದೆ.