ರಾಜ್ಯದಲ್ಲಿ ಓಮಿಕ್ರಾನ್ ವೈರಾಣು ಪತ್ತೆ:ಯಾರಿಗೂ ತೀವ್ರತೆ ಇಲ್ಲ – ಆತಂಕ ಬೇಡ ಡಾ.ಕೆ.ಸುಧಾಕರ್

 ಬೆಂಗಳೂರು: ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಿಕೊಟ್ಟ ಕೋವಿಡ್ ನ ಎರಡು ಮಾದರಿಗಳಲ್ಲಿ ಓಮಿಕ್ರಾನ್ ವೈರಾಣು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೇಗ ಹಾಗೂ ಸಮರ್ಥ ಪರೀಕ್ಷಾ ವ್ಯವಸ್ಥೆಯಿಂದ ಶೀಘ್ರ ಕೋವಿಡ್ ಓಮಿಕ್ರಾನ್ ವೈರಾಣು ಪತ್ತೆಯಾಗಿದೆ ಎಂದು ತಿಳಿಸಿದರು.

ನವೆಂಬರ್ 20 ರಂದು ದಕ್ಷಿಣ ಆಫ್ರಿಕಾದಿಂದ ಬಂದ ಪ್ರಯಾಣಿಕರೊಬ್ಬರ ಮಾದರಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದು, ಇದರಲ್ಲಿ ವೈರಾಣು ಪತ್ತೆಯಾಗಿದೆ. ಅವರು ರಾಜ್ಯಕ್ಕೆ ಬಂದಾಗ ಹೋಟೆಲ್ ನಲ್ಲಿ ತಂಗಿದ್ದರು. ಅವರ ವರದಿ ಪಾಸಿಟಿವ್ ಬಂದಿದ್ದು, ಲಕ್ಷಣ ರಹಿತವಾಗಿತ್ತು. ಮತ್ತೆ ನವೆಂಬರ್ 23 ರಂದು ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿಸಿದ್ದು, ನೆಗೆಟಿವ್ ವರದಿ ಬಂದಿದೆ ಎಂದು ತಿಳಿಸಿದ್ದರು.

ಅವರೊಂದಿಗೆ ಸಂಪರ್ಕ ದಲ್ಲಿದ್ದ 24 ಪ್ರಾಥಮಿಕ ಹಾಗೂ 240 ದ್ವಿತೀಯ  ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಲಾಗಿದೆ. ಆದರೆ ಯಾರಲ್ಲೂ ಪಾಸಿಟಿವ್ ವರದಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

46 ವರ್ಷದ ವೈದ್ಯರೊಬ್ಬರಲ್ಲಿ ಈ ವೈರಾಣು ಕಂಡುಬಂದಿದೆ. ಅವರಿಗೆ ಪಾಸಿಟಿವ್ ಆಗಿದ್ದು, ಅವರು, ಅದೇ ದಿನ ಸ್ವಯಂ ಐಸೋಲೇಟ್ ಆಗಿದ್ದಾರೆ. ಅವರಲ್ಲಿ ವೈರಾಣು ಲೋಡ್ ಅಧಿಕವಾಗಿದೆ. ಆದರೆ ಇವರಿಗೆ ಯಾವುದೇ ಪ್ರಯಾಣದ ಇತಿಹಾಸ ಇಲ್ಲ, ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸಿದ್ದು, 5 ಮಂದಿಯ ವರದಿ ಪಾಸಿಟಿವ್ ಬಂದಿದೆ. ಒಟ್ಟು ಆರು ಮಂದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮೇಲೆ ನಿರಂತರ ನಿಗಾ ಇರಿಸಿದ್ದು, ಯಾರಿಗೂ ಹೆಚ್ಚು ಸಮಸ್ಯೆಯಾಗಿಲ್ಲ ಎಂದು ವಿವರಿಸಿದರು.

ಜನರು ತಪ್ಪದೇ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಸುಧಾಕರ್ ಮನವಿ ಮಾಡಿದರು.

ಮುಖ್ಯಮಂತ್ರಿಗಳು ದೆಹಲಿಯಿಂದ ಬಂದ ಕೂಡಲೇ ಸಭೆ ನಡೆಸಿ ಚರ್ಚೆ ಮಾಡಲಿದ್ದಾರೆ. ವೈರಾಣು ನಿಯಂತ್ರಣಕ್ಕೆ ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳಲಾಗುವುದು ಯಾರೂ ಊಹಾಪೋಹಗಳನ್ನು ಹರಡಬಾರದು ಜನರು ಕೂಡಾ ಸುಳ್ಳು ‌ಸುದ್ದಿಗಳನ್ನು ನಂಬಬಾರದು ಎಂದು ಕೋರಿದರು.