ತಮ್ಮ ಪಕ್ಷದ ಮುಖಂಡರ ವಿರುದ್ಧ ಮತ್ತೆ ಕಿಡಿ ಕಾರಿದ ಹೆಚ್.ವಿಶ್ವನಾಥ್

ಮೈಸೂರು:ತಮ್ಮ ಪಕ್ಷದ ಮುಖಂಡರ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ಮತ್ತೆ ಕಿಡಿ ಕಾರಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ವಿಚಾರದಲ್ಲಿ ವೈಯುಕ್ತಿಕ ಟೀಕೆ ಸರಿಯಲ್ಲ ಎನ್ನುವ ಮೂಲಕ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಕಿಡಿ ಕಾರಿದರು.

ಸಚಿವ ಎಸ್ ಟಿ ಸೋಮಶೇಖರ್ ವಿರುದ್ದ   ವಾಗ್ದಾಳಿ ನಡೆಸಿ  ಚುನಾವಣೆ ವಿಚಾರದಲ್ಲಿ ವೈಯುಕ್ತಿಕ ಟೀಕೆ ಸರಿಯಲ್ಲ. ಒಬ್ಬ ಮಂತ್ರಿಯಾದವರಿಗೆ ಇದು ಶೋಭೆ ತರುವುದಿಲ್ಲ. ಇದರಿಂದ ಬಾಬು ಅವರ ಮನೆಯವರಿಗೆ ಎಷ್ಟು ನೋವಾಗಿದೆ. ಮೈಸೂರು ಜೆಡಿಎಸ್ ಅಭ್ಯರ್ಥಿಗೂ ನೋವಾಗಿದೆ, ಸೋಮಶೇಖರ್ ವೈಯಕ್ತಿಕ ಟೀಕೆ ಸರಿಯಲ್ಲ ಎಂದರು.

ಯುವಕರಿಗೆ ಏನು ಸಂದೇಶ ದುಡ್ಡು ತಗೊಂಡು ಮತ ಹಾಕಿ ಅಂತಾನ..? ಟಿಕೆಟ್ ಕೊಡುವಾಗಲೇ 15 ಕೋಟಿ ಇದ್ದರೆ ಬನ್ನಿ ಅನ್ನೋದ..? ಜನಪ್ರತಿನಿಧಿಗಳು ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಹಾಕಿ, ಚುನಾವಣೆ ಪಾವಿತ್ರ್ಯತೆ ಎತ್ತಿ ಹಿಡಿಯಿರಿ ಎಂದು ಸಲಹೆ  ನೀಡಿದರು.

ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಏನು ಸಂದೇಶ ಕೊಡುತ್ತಾ ಇದ್ದೀರಾ ? ಬರೀ ಕೆಲಸಕ್ಕೆ ಬಾರದ ಮಾತುಗಳನ್ನಾಡುತ್ತಿದ್ದೀರಾ, ಈಗಲೂ ಕಾಲ ಮಿಂಚಿಲ್ಲ ಎಚ್ಚೆತ್ತುಕೊಳ್ಳಿ. ನಿಮ್ಮ ನಿಮ್ಮ ಪಕ್ಷದವರಿಗೆ ಕರೆ ಕೊಡಿ ಎಂದು ಹೇಳಿದರು.

ನನ್ನ ಬಳಿಯೂ ಕೆಲವು ಸದಸ್ಯರು  ಬಂದು ಬಜಾರ್ ಕೇಳಿದರು. 50 ಸಾವಿರ ಮಂಡ್ಯದಲ್ಲಿ, ಹಾಸನದಲ್ಲಿ 1 ಲಕ್ಷ ಅಂತಾರೆ. ಮೈಸೂರಲ್ಲಿ ಎಷ್ಟು ಇದೆ ಬಜಾರ್ ಹೇಳಿ ಸರ್ ಅಂದರು. ನಾಯಕರು ಓಟ್ ಬಜಾರ್ ಮಾಡಿದ್ದಾರೆ ಎಂದು ಎಚ್.ವಿಶ್ವನಾಥ್  ಕಿಡಿಕಾರಿದರು.

ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗೋಪಾಲಕೃಷ್ಣ, ವಿಶ್ವನಾಥ್ ಇಬ್ಬರು ರಿಯಲ್ ಎಸ್ಟೇಟ್ ಗಿರಾಕಿಗಳು. ಅವರಿಬ್ಬರದು ಏನೇನು ಇದೆಯೋ ಯಾರಿಗೆ ಗೊತ್ತು ? ಅದನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ ಎಂದರು.

ಕೋವಿಡ್ ರೂಪಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ತಜ್ಞರು ಇದರ ತೀವ್ರತೆ ಬಗ್ಗೆ ಹೇಳಿದ್ದಾರೆ. ಆದರೆ ಶಾಲಾ ಕಾಲೇಜುಗಳಲ್ಲಿ ದನ ತುಂಬಿದಂತೆ ಮಕ್ಕಳನ್ನು ತುಂಬಲಾಗುತ್ತಿದೆ. ಶಿಕ್ಷಣ ಸಚಿವರು ಏನು ಮಾಡುತ್ತಿದ್ದಾರೆ, ಹೆಚ್ಚು ಕಡಿಮೆಯಾದರೆ ಯಾರು ಹೊಣೆ, ದೊಡ್ಡ ಅನಾಹುತವಾಗುತ್ತದೆ,0 ದಿಂದ 7ವರೆಗೆ  ಮಕ್ಕಳಿಗೆ ಮನೆಯಲ್ಲೇ ಪಾಠ ಆಗಬೇಕು.  ಅವಸರದಲ್ಲಿ ಶಾಲಾ ಕಾಲೇಜುಗಳ ಬಗ್ಗೆ ನಿರ್ಧಾರ ಬೇಡ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಮಾಡಬೇಕು ಎಂದು ಸಲಹೆ ನೀಡಿದರು.