ಬೆಳಗಾವಿ: ಕನ್ನಡ ಭಾಷೆಗೆ ಅಂತರ್ಗತ ಶಕ್ತಿ ಇರುವುದರಿಂದ, ಜಗತ್ತಿನಲ್ಲಿ ಯಾರಿಂದಲೂ ನಮ್ಮ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ ಎಂದು ಮುಖ್ಯ ಮಂತ್ರಿ ಬಸವರಾ ಬೊಮ್ಮಾಯಿ ತಿಳಿಸಿದರು.
ಬೆಳಗಾವಿಯ ಕನ್ನಡ ಭವನದಲ್ಲಿ ನೂತನವಾಗಿ ನಿರ್ಮಿಸಲಾದ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು
ಕನ್ನಡ ಭಾಷೆಯ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿ ಮುಂದಕ್ಕೆ ಕೊಂಡೊಯ್ಯಬೇಕೆಂದು ಕರೆ ನೀಡಿದರು.
ಜಗತ್ತಿನಲ್ಲಿ ಯಾವುದೇ ದೇಶಕ್ಕೆ ಹೋಗಿ ಸಾಧನೆ ಮಾಡಿದರೂ ಕನ್ನಡತನವನ್ನು ಕನ್ನಡಿಗರು ಮರೆಯಬಾರದು ಎಂದು ಸಲಹೆ ನೀಡಿದರು.
ಭಾಷೆ ನಾಡಿಗೆ ಬಹಳ ಮುಖ್ಯ, ಸಂಸ್ಕೃತಿ ಇಲ್ಲದೆ ಮನಷ್ಯ, ಸಮಾಜ ಇರುವುದಿಲ್ಲ.
ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಹಳೆಗನ್ನಡ, ನುಡಿ ಕನ್ನಡ, ಜನಪದ ಕನ್ನಡ ಹೀಗೆ ಭಾಷಾ ವೈವಿಧ್ಯತೆಯಿದೆ. ವಚನ ಹಾಗೂ ದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿವೆ.
ವಚನ ಹಾಗೂ ದಾಸ ಸಾಹಿತ್ಯವನ್ನು ಬೆಳೆಸಬೇಕು ಹಾಗೂ ಪ್ರಪಂಚಕ್ಕೆ ಪಸರಿಸುವ ಕೆಲಸವಾಗಬೇಕಾಗಿದೆ ಎಂದು ಸಿಎಂ ತಿಳಿಸಿದರು.
ಭಾಷೆ ನಮ್ಮ ಅಸ್ಮಿತೆಯಾಗಿದೆ.ಅದನ್ನು ಮರೆಯಬಾರದು, ಕನ್ನಡ ಸಾಕ್ಷಿ ಪ್ರಜ್ಞೆ ಮಾನವೀಯ ನೆಲೆ ಹೊಂದಿದೆ. ಈ ಮಾನವೀಯ ನೆಲೆ ಬಸವಣ್ಣ, ಅಲ್ಲಮಪ್ರಭು, ದಾಸರ ಸಾಹಿತ್ಯದಲ್ಲಿ ಕಾಣಬಹುದು ಎಂದು ಹೇಳಿದರು.
ಬೆಳಗಾವಿಯಲ್ಲಿ ಭಾಷಾತೀತವಾಗಿ ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲೀಷ್ ನಾಟಕಗಳು ನಡೆಯಬೇಕು ಎಂದು ಕರೆ ನೀಡಿದರು.
ನಶಿಸಿಹೋಗತ್ತಿರುವ ಗ್ರಾಮೀಣ ಭಾಗದ ಪಾರಿಜಾತ ಕಲೆ ಉಳಿಯವ ನಿಟ್ಟಿನಲ್ಲಿ ರಂಗಮಂದಿರ ಬಳಕೆಗೆ ಬರಲಿದೆ.
ಬೆಳಗಾವಿಯಲ್ಲಿ ಕನ್ನಡ ಭಾಷೆಗೆ ಉತ್ತೇಜನ ನೀಡಬೇಕು. ಚಿಕ್ಕೋಡಿಯಲ್ಲಿ ಕನ್ನಡ ಭವನ, ಗಡಿ ಭಾಗದ ಹಳ್ಳಿಗಳಲ್ಲಿ ಶಾಲೆಗಳು ತೆರೆಯಬೇಕು ಎಂದು ಬೊಮ್ಮಾಯಿ ತಿಳಿಸಿದರು.
ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಳಾ ಸುರೇಶ್ ಅಂಗಡಿ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ, ಕಸಪಾ ಅಧ್ಯಕ್ಷ ಮಹೇಶ್ ಜೋಶಿ, ಜಿಲ್ಲಾಕಾರಿ ನಿತೇಶ್ ಪಾಟೀಲ್, ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಗಿರಿಜಾ ಲೊಕೇಶ್, ಕನ್ನಡ ಭವನ ಆಡಳಿತ ಮಂಡಳಿ ಗೌರವ ಅಧ್ಯಕ್ಷ ಅಲ್ಲಮಪ್ರಭು ಸ್ವಾಮೀಜಿ, ಎಂ.ಸಿ.ಎ ಅಧ್ಯಕ್ಷ ಎಂ.ಎಸ್.ಕರಿಗೌಡರ್ ಮತ್ತಿತರರು ಉಪಸ್ಥಿತರಿದ್ದರು.

