ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ ಆಗುತ್ತಿದ್ದಾರೆ:ಯತ್ನಾಳ್ ವಾಗ್ದಾಳಿ

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಟಿಪ್ಪು ಸುಲ್ತಾನ ಆಗುತ್ತಿದ್ದಾರೆ. ಹಿಜಬ್ ನಿಷೇಧ ಹಿಂತೆಗೆದುಕೊಳ್ಳುವುದು ಸೂಕ್ತ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಹಿಜಬ್ ನಿಷೇಧವನ್ನ ಬಿಜೆಪಿ ಮಾಡಿಲ್ಲ. ಶಾಲೆಯಲ್ಲಿ ಸಮಾನತೆ ಇರಲಿ ಅಂತಾ ಬಾಬಾಸಾಹೇಬ್ ಅಂಬೇಡ್ಕರ್ ಒಂದೇ ಸಮವಸ್ತ್ರದ ಕಾಯ್ದೆ ಮಾಡಿದ್ದರು ಎಂದು ಹೇಳಿದರು.

ಈ ರೀತಿ ಅವರವರಿಗೆ ತಿಳಿದಿದ್ದನ್ನ ಅವರು ಧರಿಸಿ ಬರೋದಾದ್ರೆ, ನಾಳೆ ಹಿಂದೂಗಳು ಕೇಸರಿ ಶಾಲು, ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಾರೆ. ಇದು ಸಂಘರ್ಷಕ್ಕೆ ಹಾದಿ ಆಗಲಿದೆ ಎಂದು ಎಚ್ಚರಿಸಿದರು.

ಶ್ರೀಮಂತರು ಒಳ್ಳೆಯ ಬಟ್ಟೆ, ಬಂಗಾರ ಹಾಕಿಕೊಂಡು ಬರುತ್ತಾರೆ. ಆಗ ಬಡ ಮಕ್ಕಳಿಗೆ ಹೇಗೆ ಅನಿಸಬಹುದರ ಅರಿವಿರಲಿ ಎಂದು ತಿಳಿಸಿದರು.

ಹಿಂದೂಗಳು ಗೋಮಾಂಸ ತಿನ್ನಬಾರದು ಅಂತಾ ಇದೆ, ಅದಕ್ಕೆ ನಾವು ತಿನ್ನುವುದಿಲ್ಲ, ಮುಸ್ಲಿಮರು ಹಂದಿ ತಿನ್ನಬಾರದು ಅಂತಾ ಇದೆ, ಅದಕ್ಕೆ ಅವರು ತಿನ್ನಲ್ಲ. ತಿನ್ನುವುದರ ಬಗ್ಗೆ ಯಾರೂ ಏನೂ ಹೇಳಿಲ್ಲ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಮರ ಪುಷ್ಟೀಕರಣಕ್ಕೆ ಸಿದ್ದರಾಮಯ್ಯ ನಿಂತಿದ್ದಾರೆ, ಅವರೆಲ್ಲ ಇವರಿಗೆ ಮತ ಚಲಾಯಿಸ್ತಾರೆ ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಾನು ಲೋಕಸಭೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬಾಗಲಕೋಟೆಯಿಂದ ನಾನೇಕೆ ಸ್ಪರ್ಧೆ ಮಾಡಲಿ. ಅಲ್ಲಿ ಹಾಲಿ ಗದ್ದಿಗೌಡ್ರು ಇದ್ದಾರೆ, ಅನೇಕ ಸಮರ್ಥರು ಇದ್ದಾರೆ ಎಂದು ಹೇಳಿದರು.

ಬೀದರ್ ನಿಂದ ಕೂಡ ಸ್ಪರ್ಧಿಸಲು ಕೆಲವರು ಮನವಿ ಮಾಡಲು ಬಂದಿದ್ದರು, ಅಲ್ಲೂ ಕೂಡ ಸಮರ್ಥರಿದ್ದಾರೆ,ನಾನು ರಾಜ್ಯದಲ್ಲಿಯೇ ಆರಾಮಾಗಿದ್ದೇನೆ, ಕೇಂದ್ರಕ್ಕೆ ಹೋಗುವ ಅವಶ್ಯಕತೆ ನನಗಿಲ್ಲ ಎಂದು ಯತ್ನಾಳ್ ‌ಸ್ಪಷ್ಟಪಡಿಸಿದರು.