ಸಿಎಂ ವಿರುದ್ಧ ಬಿಎಸ್ ವೈ ಕಿಡಿ

ಬೆಂಗಳೂರು:‌ ಹಿಜಬ್ ನಿಷೇಧ ವಾಪಸು ಪಡೆದು ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಆಕ್ರೋಶ ‌ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಮುಖ್ಯಮಂತ್ರಿಗಳು ತೆಗೆದುಕೊಂಡಿರೋ ಈ ನಿರ್ಧಾರವನ್ನ ಖಂಡಿಸುತ್ತೇನೆ,ಇದು ಸಿಎಂ ಗೆ ಶೋಭೆ ತರುವಂತಹದ್ದಲ್ಲ ಎಂದು ಹೇಳಿದರು.

ಅಧಿಕಾರ ಇದೆ ಅಂತ ರಾಜಕೀಯ ದೊಂಬರಾಟ ಮಾಡಲು ಹೊರಟಿದ್ದಾರೆ. ನೋಡೋಣ ಎಲ್ಲಿಯವರೆಗೆ ಇದೇ ರೀತಿ ಮಾಡ್ತಾರೆ ಎಂದು ‌ಗರಂ ಆಗಿ ನುಡಿದರು.

ಬಿಜೆಪಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ವಿಚಾರ ಇಲ್ಲ, ಜನರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಶಾಲಾ ಮಕ್ಕಳಿಗೆ ಸಮವಸ್ತ್ರ ನೀತಿ ಅಗತ್ಯ, ಇದನ್ನು ಧಿಕ್ಕರಿಸಿ ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದ್ದಾರೆ, ಈಗಲೇ ಎಚ್ಚೆತ್ತು ಕೂಡಲೇ ಹಿಜಬ್ ನಿಷೇಧ ನಿರ್ಣಯ ಹಿಂದಕ್ಕೆ ಪಡಯಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಸರ್ಕಾರ ಭಂಡ ಸರ್ಕಾರ, ಹಿಜಬ್ ವಾಪಸ್ ಪಡೆಯಿರಿ ಅಂತ ಯಾವ ಮುಸ್ಲಿಂ ನಾಯಕರು ಹೇಳಿದ್ದರು,ಅವರ ಉಚಿತ ಗ್ಯಾರಂಟಿಗಳನ್ನು ಜಾರಿ ಮಾಡಲಾಗದೇ ಈರೀತಿ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿ ಎಸ್ ವೈ ಗುಡುಗಿದರು.

ಕಾಂಗ್ರೆಸ್ ಸರ್ಕಾರ ಬರಗಾಲವನ್ನು ಮರೆತೇ ಬಿಟ್ಟಿದೆ,ಇಲ್ಲದ್ದನ್ನೆಲ್ಲಾ ಮಾಡಹೊರಟಿದೆ ಎಂದು ಟೀಕಿಸಿದರು.