ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಾಮಾನ್ಯವಾಗಿ 10 ದಿನಗಳ ಕಾಲ ನಡೆಯುತ್ತದೆ.ಆದರೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 11 ದಿನಗಳ ಕಾಲ ನಡೆಯಲಿದೆ!
ದಸರಾ ಪ್ರಾರಂಭವಾಗಿದ್ದಾಗಿನಿಂದ ಅಂದರೆ 400 ವರ್ಷಗಳಿಂದಲೂ 10 ದಿನಗಳ ಕಾಲ ದಸರಾ ನಡೆಯುತ್ತಲೇ ಬಂದಿದೆ. ದಸರಾ ಎಂದರೆ ದಶ+ಹರ – ಹತ್ತು ದಿನಗಳ ಆಚರಣೆ.
ಆದರೆ ಈ ಬಾರಿ ಮಾತ್ರ ದಸರಾ ಮಹೋತ್ಸವ ದಾಖಲೆ ಬರೆಯಲಿದೆ.ಈ ಬಾರಿ ದಸರಾ 10 ಅಲ್ಲ, 11 ದಿನ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ದಸರಾ ಆಚರಣೆ ಮಾಡಲಾಗುತ್ತದೆ.
ಸೆಪ್ಟಂಬರ್ 26, ಸೆ.27 ಎರಡೂ ದಿನ ಪಂಚಮಿ ಇರುವುದರಿಂದ ಈ ಬಾರಿ 11 ದಿನ ದಸರಾ ಆಚರಣೆ ಆಗುತ್ತಿದೆ.
ಇದು ಇತಿಹಾಸದಲ್ಲೇ ಕಂಡು- ಕೇಳರಿಯದ ದಸರಾ ಮಹೋತ್ಸವ ಆಗಿದ್ದು, 400 ವರ್ಷಗಳ ಇತಿಹಾಸದಲ್ಲೇ ಈ ರೀತಿ 11 ದಿನಗಳ ಕಾಲ ದಸರಾ ಆಚರಣೆ ಮಾಡುತ್ತಿರುವುದು ಇದೇ ಪ್ರಥಮ ಬಾರಿ.
ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳು ವಿದ್ವಾಂಸರಲ್ಲಿಯೇ ಗೊಂದಲ ಹುಟ್ಟುಹಾಕಿದೆ.1399ರ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ, 1410 ರ ಮೈಸೂರು ಸಂಸ್ಥಾನದ ಆಳ್ವಿಕೆ ಕಾಲದಿಂದ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತಿದ್ದು, ಈವರೆಗೆ 11 ದಿನಗಳ ಕಾಲ ದಸರಾ ಮಹೋತ್ಸವ ಆಚರಿಸಿದ ಉದಾಹರಣೆಗಳಿಲ್ಲ.
ನವರಾತ್ರಿಯ ಮರುದಿನ ವಿಜಯದಶಮಿ ಆಚರಿಸುವುದು ಸಂಪ್ರದಾಯ. ವಿಜಯದಶಮಿ ಯಂದು ಅರಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆದರೇ ಸರ್ಕಾರದ ವತಿಯಿಂದ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.
ಇನ್ನು 11 ದಿನಗಳ ದಸರಾ ಆಚರಣೆ ಅಚ್ಚರಿ, ಕೌತುಕದ ಜೊತೆಗೆ ಚರ್ಚೆಗೆ ಒದಗಿಸಿದೆ. ರಾಜ್ಯ ಸರ್ಕಾರ, ಯದುವಂಶದ ರಾಜವಂಶಸ್ಥರು ದಸರಾ ಹೇಗೆ ಆಚರಿಸ್ತಾರೆ ಎಂಬ ಕುತೂಹಲ ಮೂಡಿದೆ.