ಮೈಸೂರು ಉಪವಿಭಾಗಾಧಿಕಾರಿಯಾಗಿದ್ದ ನಂದೀಶ್ ವಿರುದ್ದ ಎಫ್ ಐ‌ಆರ್

ಮೈಸೂರು: ಮೈಸೂರು ಉಪವಿಭಾಗಾಧಿಕಾರಿ ಯಾಗಿದ್ದ ಪ್ರಸ್ತುತ ಅಮಾನತ್ತಿನಲ್ಲಿರುವ ನಂದೀಶ್ ವಿರುದ್ದ ಸರ್ಕಾರದ ಆದೇಶದ ಹಿನ್ನಲೆ ಎಫ್ಐಆರ್ ದಾಖಲಾಗಿದೆ.

ನಂದೀಶ್ ಅವರ ಕರ್ತವ್ಯದ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದೀಶ್ ಕರ್ತವ್ಯ ನಿರ್ವಹಿಸಿದ 22-2-2024 ರಿಂದ 7-6-2024 ರವರೆಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 46 ಪ್ರಕರಣಗಳಿಗೆ ಸಂಭಂಧಿಸಿದಂತೆ ವಿಚಾರಣೆಗೆ ಅವಕಾಶ ಕೊಡದೆ,ದಾಖಲೆಗಳನ್ನೂ ಪಡೆದುಕೊಳ್ಳದೆ,ವಿಚಾರಣೆಗೆ ತೆಗೆದುಕೊಂಡ ದಿನಾಂಕದಿಂದ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿರುತ್ತಾರೆ.

ಕಕ್ಷಿದಾರರಿಗೆ ತಮ್ಮ‌ನಿಲುವು ಮಂಡಿಸಲು ಅವಕಾಶ ಕೊಡದೆ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪವಿದ್ದು,ಅವರ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.

ಈ ಹಿನ್ನಲೆಯಲ್ಲಿ ನಂದೀಶ್ ವಿರುದ್ದ ಎಫ್ಐಆರ್ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ.

ಹಾಗಾಗಿ ಜಿಲ್ಲಾಧಿಕಾರಿಯವರ ಆದೇಶದಂತೆ ಗ್ರೇಡ್ 2 ತಹಸೀಲ್ದಾರ್ ರಾಜು ಅವರು ನಜರಬಾದ್ ಪೊಲೀಸ್ ಠಾಣೆಯಲ್ಲಿ ನಂದೀಶ್ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.